ಪುತ್ತೂರಿನ ಜನತೆಯ ಬಹು ನಿರೀಕ್ಷಿತ ಬೇಡಿಕೆಯಾದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂಬಡಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 7) ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಪುತ್ತೂರಿಗೆ ಹೊಸ ಮೆಡಿಕಲ್ ಕಾಲೇಜ್ ಘೋಷಿಸಲಾಗಿದೆ. ಈ ನಿರ್ಧಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ನಿರೀಕ್ಷಿಸಿದ ಮೂಲಸೌಕರ್ಯ ನಿರ್ಮಾಣಕ್ಕೆ ದಾರಿ ತೆರೆಯಲಿದೆ.
ಬಜೆಟ್‌ನಲ್ಲಿ ಏನಿದೆ?
ಬಜೆಟ್ ಪ್ರಕಾರ, ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಸ್ತುತ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತಿಕರಿಸಲು ಕ್ರಮ ವಹಿಸಲಾಗುವುದು. ಈ ನಿರ್ಧಾರ ವೈದ್ಯಕೀಯ ಶಿಕ್ಷಣಕ್ಕಾಗಿ ಹಾರಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಆರೋಗ್ಯ ಸೇವೆಗಾಗಿ ನಿರೀಕ್ಷಿಸುತ್ತಿರುವ ಸ್ಥಳೀಯರಿಗೆ ನಿಖರ ಪರಿಹಾರ ಒದಗಿಸಲಿದೆ.
ಶಾಸಕ ಅಶೋಕ್ ರೈಯವರ ಭಗೀರಥ ಪ್ರಯತ್ನ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜ್ ಸ್ಥಾಪನೆಯ ಭರವಸೆ ನೀಡಿದ್ದರು. ಶಾಸಕರಾಗಿ ಆಯ್ಕೆಯಾದ ಬಳಿಕ, ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ಅವರು ನಿರಂತರ ಪ್ರಯತ್ನ ನಡೆಸಿದರು. ಕಂದಾಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಮೂಲಕ ಪ್ರಸ್ತಾವನೆ ತಲುಪಿಸಲು ಪ್ರಯತ್ನಿಸಿದ ಅವರು, ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕಿದರು.
ಕಳೆದ ಡಿಸೆಂಬರ್‌ನಲ್ಲಿ ಪುತ್ತೂರಿನಲ್ಲಿ ನಡೆದ "ಅಶೋಕ್ ಜನಮನ" ಕಾರ್ಯಕ್ರಮದಲ್ಲಿ ಸಹಸ್ರಾರು ಜನರು 'ವಿ ವಾಂಟ್ ಮೆಡಿಕಲ್ ಕಾಲೇಜ್' ಎಂದು ಘೋಷಣೆ ಕೂಗುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೇರುವಂತೆ ಶಾಸಕರು ಪ್ರೇರೇಪಿಸಿದರು. ಈ ವಾತಾವರಣ ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಸರ್ಕಾರದ ಮುಂದಿಡಲು ಸಹಕಾರಿಯಾಯಿತು.
610 ಕೋಟಿ ವೆಚ್ಚದ ಪ್ರಸ್ತಾವನೆ – ಕೊನೆಗೂ ಒಪ್ಪಿಗೆ
ಕಳೆದ ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಈ ಕುರಿತು ಪ್ರಶ್ನೆ ಎತ್ತಿದಾಗ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಆರ್. ಪಾಟೀಲ್, ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ 610 ಕೋಟಿ ಅನಾವರ್ತಕ ವೆಚ್ಚ ಮತ್ತು 60 ಕೋಟಿ ಅವರ್ತಕ ವೆಚ್ಚ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಆ ವೇಳೆಗೆ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇಲ್ಲ ಎಂಬುದಾಗಿ ಹೇಳಲಾಗಿತ್ತು.
ಆರು ತಿಂಗಳ ಬಳಿಕ ಇಂದು ಮಂಡನೆಯಾದ ಬಜೆಟ್‌ನಲ್ಲಿ, ಪುತ್ತೂರಿನಲ್ಲಿ ಹೊಸ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಿದ್ದತೆ ಮಾಡಲಾಗುವುದು ಎಂಬ ಘೋಷಣೆ ಬರಿದಾಗಿದ್ದು, ಸ್ಥಳೀಯರ ಹಳೆಯ ಕನಸು ಸಾಕಾರವಾಗುತ್ತಿದೆ. ಈ ಹೊಸ ಮೆಡಿಕಲ್ ಕಾಲೇಜು, ವೈದ್ಯಕೀಯ ಶಿಕ್ಷಣದೊಂದಿಗೆ ಸಮಾನವಾಗಿ ಪುತ್ತೂರಿನ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

