ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂಟು ಹೊಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವಿರುದ್ಧ ಇರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ದೇಶದ ಹಲವು ನಗರಗಳಲ್ಲಿ ದಾಳಿ ನಡೆಸಿದೆ.
ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಅವರ ಬಂಧನದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ದೆಹಲಿಯ ಎರಡು ಕಡೆಗಳು ಸೇರಿದಂತೆ ಕೇರಳದ ತಿರುವನಂತಪುರ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್‌ನ ಪಾಕುರ್, ಮಹಾರಾಷ್ಟ್ರದ ಸ್ಥಳೀಯ ಸ್ಥಳ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಲಖನೌ ಮತ್ತು ಜೈಪುರದಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇ.ಡಿ ಪ್ರಕಾರ, ಪಿಎಫ್‌ಐ ಮತ್ತು ಎಸ್‌ಡಿಪಿಐ ನಡುವೆ ಸಂಘಟನಾತ್ಮಕ ಸಂಬಂಧವಿದ್ದು, ಎಸ್‌ಡಿಪಿಐ ಮೂಲಕ ಪಿಎಫ್‌ಐ ಅನೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು. ಭಯೋತ್ಪಾದನಾ ಚಟುವಟಿಕೆ ಸೇರಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಆರೋಪದ ಮೇಲೆ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿತ್ತು.
ಎಸ್‌ಡಿಪಿಐ 2009ರಲ್ಲಿ ಸ್ಥಾಪನೆಯಾಗಿದ್ದು, ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿಯೂ ನೋಂದಾಯಿತವಾಗಿದೆ.
