ನ್ಯೂಸ್ ಉಪ್ಪಿನಂಗಡಿ:ಡಿ.30,ಬೆಂಗಳೂರಿನ ರೀತಿ ಮಂಗಳೂರಿನಲ್ಲೂ ಹೊಸ ವರ್ಷಾಚರಣೆಗೆ ಜನ ಸೇರುವುದನ್ನು ನಿರ್ಬಂಧಿಸಲು 144 ಸೆಕ್ಷನ್ ಹೇರಲಾಗಿದೆ. ಮಂಗಳೂರು ನಗರ ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಆದೇಶ ಮಾಡಿದ್ದಾರೆ.
ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ.6 ಗಂಟೆಯ ವರೆಗೆ ಸೆಕ್ಷನ್ ಜಾರಿಯಲ್ಲಿ ಇರಲಿದೆ. ಇದರ ಪ್ರಕಾರ, ಹೊಸ ವರ್ಷಾಚರಣೆ ನೆಪದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧಿಸಲಾಗಿದೆ. ಅಲ್ಲದೆ, ಸಾರ್ವಜನಿಕ ಸ್ಥಳ, ರಸ್ತೆ, ಬೀಚ್ ಮತ್ತು ಮೈದಾನಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ನಿಷೇಧ ವಿಧಿಸಲಾಗಿದೆ.
ಪಬ್, ಹೊಟೇಲ್ ನವರು ಜನ ಸೇರಿಸಿ ಹೊಸ ವರ್ಷ ಆಚರಣೆ ಮಾಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇದಲ್ಲದೆ ಖಾಸಗಿ ವಸತಿ ಸಮುಚ್ಚಯ, ಖಾಸಗಿ ಕ್ಲಬ್ ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೆಕ್ಷನ್ ಅನ್ವಯ ಹೊಟೇಲ್, ಬಾರ್, ಪಬ್, ಮಾಲ್ ಗಳಲ್ಲಿ ಡಿಜೆ, ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನೂ ಮಾಡುವಂತಿಲ್ಲ.
ಆದರೆ, ಬಾರ್, ಪಬ್ ಗಳಲ್ಲಿ ನಿತ್ಯದ ವ್ಯವಹಾರಕ್ಕೆ ಅನುಮತಿ ನೀಡಲಾಗಿದೆ. ಗ್ರಾಹಕರು ಹೆಚ್ಚು ಹೊತ್ತು ನಿಲ್ಲದಂತೆ ಹೊಟೇಲ್, ಪಬ್ ಮತ್ತು ಬಾರ್ ಸಿಬಂದಿ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಉಲ್ಲಂಫಿಸಿದ್ರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.