ನ್ಯೂಸ್ ಉಪ್ಪಿನಂಗಡಿ:ಡಿ.30 ವಿಶಿಷ್ಟ ಪ್ರಚಾರದ ಕರಪತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದ ತಾಲ್ಲೂಕಿನ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಹಾಗೂ ದೊಡ್ಡಗುಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಗಂಗಮ್ಮ ಎರಡೂ ಕಡೆಗಳಲ್ಲಿ ಸೋತಿದ್ದಾರೆ. ಅವರ ಪ್ರಚಾರದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು.
ಗಂಗಮ್ಮ ಕಲ್ಕೆರೆ ಕ್ಷೇತ್ರದಲ್ಲಿ ಆರು ಮತ್ತು ದೊಡ್ಡಗುಣಿ ಕ್ಷೇತ್ರದಲ್ಲಿ ಎರಡು ಮತ ಪಡೆದಿದ್ದಾರೆ.
ಗೆದ್ದರೆ ಮತ್ತು ಸೋತರೆ ಮಾಡುವ ಕೆಲಸಗಳ ಪಟ್ಟಿಯನ್ನು ಅವರು ಕರಪತ್ರದಲ್ಲಿ ಮುದ್ರಿಸಿದ್ದರು. ಗೆದ್ದರೆ ಕರೇತಿಮ್ಮರಾಯಸ್ವಾಮಿ ದೇವಸ್ಥಾನದ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಮಾಡುವೆ, ಅರಳೀಕಟ್ಟೆ ಕಟ್ಟಿಸುವೆ, ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಕಲ್‌ವರೆಗೆ ರಸ್ತೆ ಮಾಡಿಸುವೆ, ಊರ ಮುಂದೆ ಮಳೆ ನೀರು ರಸ್ತೆಗೆ ಹರಿಯದೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಬಯ್ಯನ ಗದ್ದೆವರೆಗೆ ಸಿಸಿ ಚರಂಡಿ ಮಾಡಿಸುವೆ ಎಂದಿದ್ದರು.
ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುವೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡೆದಿರುವ 40 ಕುಟುಂಬಗಳ ಮಾಸಾಶನ ಹಣ ನಿಲ್ಲಿಸುವೆ, ಸರ್ವೆ ನಂ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವೆ, ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್‌ಲೀಸ್ಟ್‌ನಂತೆ ತೆರವುಗೊಳಿಸಲು ಹೋರಾಟ ಮಾಡಲಾಗುವುದು ಎಂದು ಕರಪತ್ರದಲ್ಲಿ ತಿಳಿಸಿದ್ದರು.