
ಟ್ರೂ ಮೀಡಿಯಾ ನ್ಯೂಸ್: ನವೆಂಬರ್ 1,
ಚುನಾವಣೆಯ ಹೊಸ್ತಿಲಿನಲ್ಲಿಯೇ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಭಾರಿ ಆಘಾತ ಎದುರಾಗಿದೆ. ಚುನಾವಣೆಗೆ ಕೇವಲ ಎರಡೇ ದಿನ ಬಾಕಿ ಇರುವಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಮರಳಿ ಸೇರ್ಪಡೆಗೊಂಡು ಬಿಜೆಪಿ ಭಾರಿ ಮುಖಭಂಗ ಉಂಟುಮಾಡಿದ್ದಾರೆ.
ಈ ಮೂಲಕ ಉಪ ಚುನಾವಣೆಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ರಾಮನಗರದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವ ಕಾಂಗ್ರೆಸ್ ತೀರ್ಮಾನವನ್ನು ವಿರೋಧಿಸಿ ತಿಂಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಗೊಂಡು,ಅದರ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿದಿದ್ದ ಚಂದ್ರಶೇಖರ್ ಬಿಜೆಪಿಗೆ 'ಕೈ' ಕೊಟ್ಟು ಮತ್ತೆ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ಮುಖಂಡನನ್ನೇ ಪಕ್ಷಕ್ಕೆ ಸೆಳೆದುಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಲು ಬಿಜೆಪಿ ಪ್ರಯತ್ನಿಸಿತ್ತು.
ಆದರೆ, ಈಗ ಅದರ ಬಾಣವೇ ಹಿಂದಿರುಗಿ ಬಂದು ಬಿಜೆಪಿಗೆ ತಗುಲಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದಾರೆ.
ನಾನು ಮೂಲತಃ ಕಾಂಗ್ರೆಸ್ಸಿಗ. ಬಿಜೆಪಿಯಿಂದ ಟಿಕೆಟ್ ಕೊಟ್ಟರು, ಕೈಯಲ್ಲಿ ಬಾವುಟ ಇಟ್ಟರು, ಆದರೆ ಯಾರೂ ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಮರಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ., ಇದಕ್ಕೆಲ್ಲ ಸಿಪಿ ಯೋಗೇಶ್ವರ್ ಕಾರಣ. ಅವರು ಎಲ್ಲಿಯೂ ಕುಳಿತು ಸುದ್ದಿಗೋಷ್ಠಿ ಮಾಡುತ್ತಾರೆ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯ ಸಹವಾಸವೇ ಬೇಡ ಎಂದು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದರು.