ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅಡ್ಡಿ; ಲಾಠಿ ಪ್ರಹಾರ, 16 ಮಂದಿ ವಶಕ್ಕೆ - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಅಕ್ಟೋಬರ್ 16, 2018

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅಡ್ಡಿ; ಲಾಠಿ ಪ್ರಹಾರ, 16 ಮಂದಿ ವಶಕ್ಕೆ


ತಿರುವನಂತಪುರ, ಅ.17: ಸುಪ್ರೀಂ ಕೋರ್ಟ್ ಆದೇಶದಂತೆ ಶ್ರೀ ಕ್ಷೇತ್ರ ಶಬರಿಮಲೆಗೆ ಮಹಿಳೆಯರಿಗೆ  ಪ್ರವೇಶಾವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಶಬರಿಮಲೆಯ ಪ್ರವೇಶ ಹಾದಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಮಹಿಳೆಯರು ವಾಹನದಲ್ಲಿ  ತೆರಳದಂತೆ ಅಡ್ಡಿಪಡಿಸಿದ ಪ್ರತಿಭಟನೆಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಡ್ಡಿಪಡಿಸಿದ 16 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸುಪ್ರೀಂ ಕೋರ್ಟ್ ನ ಆದೇಶದಂತೆ  ಮೊದಲ ಬಾರಿ ಶಬರಿಮಲೆಯಲ್ಲಿ  ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ತುಲಾಮಾಸದ  ಐದು ದಿನಗಳ ಪೂಜೆಗೆ ಬುಧವಾರ ಸಂಜೆ 5 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ.  ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಹಿಳೆಯರು ಆಗಮಿಸುತ್ತಿದ್ದಾರೆ.

ಅಯ್ಯಪ್ಪ ದೇವಾಲಯಕ್ಕೆ  ಮಹಿಳೆಯರ  ಪ್ರವೇಶವನ್ನು ತಡೆಯುವ ಉದ್ದೇಶಕ್ಕಾಗಿ ನೂರಾರು ಮಹಿಳೆಯರ ಸಹಿತ ಅಯ್ಯಪ್ಪ ಭಕ್ತರು ಶಬರಿಮಲೆಗೆ ಪ್ರವೇಶ ಕಲ್ಪಿಸುವ ನೀಲಕ್ಕಲ್‌ನಲ್ಲಿ ಎಲ್ಲ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದಾರೆ. ಕೇರಳ ಸರಕಾರ ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ಬದ್ಧವಾಗಿದೆ.ಸರಕಾರ ಸುಪ್ರೀಂ ಕೋರ್ಟ್ ನ   ತೀರ್ಪು ಜಾರಿಗೊಳಿಸುತ್ತಿರುವುದನ್ನು  ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ.   ಶಬರಿಮಲೆಯಿಂದ 20 ಕಿ.ಮೀ. ದೂರದಿಂದಲೇ ಮಹಿಳೆಯರನ್ನು ತಡೆಯಲಾಗುತ್ತಿದೆ.

Pages