ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಉಂಟಾದ ಭಯೋತ್ಪಾದಕ ದಾಳಿ ಬಳಿಕ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪ್ರತಿಸ್ಪಂದನೆ ನೀಡಿದ್ದು, ಈ ಸೈನಿಕ ಕಾರ್ಯಾಚರಣೆಗೆ ನಮನ ಸಲ್ಲಿಸಲು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲು ರಾಜ್ಯದ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸೂಚನೆ ನೀಡಿದ್ದಾರೆ.
ಭಾರತೀಯ ಸೇನೆಯ ಶೌರ್ಯವನ್ನು ಕೊಂಡಾಡಲು, ಮತ್ತು ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಶ್ರೇಯಸ್ಸಿಗಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಉದ್ದೇಶ ಈ ಕ್ರಮದ ಹಿಂದೆ ಇದೆ. ಈ ಬಗ್ಗೆ ಸಚಿವರು ವಕ್ಫ್ ಬೋರ್ಡ್ ಸಿಇಒಗೆ ಪತ್ರ ರವಾನಿಸಿ ಎಲ್ಲ ಮಸೀದಿಗಳಿಗೆ ಸೂಕ್ತ ಸೂಚನೆ ನೀಡುವಂತೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಕರ್ನಾಟಕದ ಮುಜರಾಯಿ ಇಲಾಖೆಯು ದೇವಸ್ಥಾನಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ನೀಡಿದ್ದು, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರೂ ಈ ಕ್ರಮಕ್ಕೆ ಮುಂದಾಗಿದ್ದರು. ಈ ಹಿನ್ನೆಲೆ ಮಸೀದಿಗಳಲ್ಲಿಯೂ ಪ್ರಾರ್ಥನೆ ನಡೆಯಬೇಕೆಂಬ ಒತ್ತಡ ವ್ಯಕ್ತವಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಈ ನಿರ್ಧಾರಕ್ಕೆ ಹಲವಡೆ ಮೆಚ್ಚುಗೆ ವ್ಯಕ್ತವಾಗಿದೆ.
‘ಆಪರೇಷನ್ ಸಿಂಧೂರ’ ಯೋಧರ ಧೈರ್ಯ ಮತ್ತು ಬಲವರ್ಧನೆಗಾಗಿ ದೇಶಾದ್ಯಾಂತವಾಗಿ ಕೃತಜ್ಞತೆ ಸಲ್ಲಿಸಲು ನಡೆಯುತ್ತಿರುವ ಈ ಪ್ರಾರ್ಥನೆ ಹಾಗೂ ಪೂಜೆಗಳ ಕ್ರಮದ ಮೂಲಕ ಭಾರತದಲ್ಲಿ ಧರ್ಮಗಳ ನಡುವಿನ ಸಹಬಾಳ್ವೆಯಾದೂ ಪ್ರಜ್ಞಾಪರವಾಗಿ ಬೆಳಗುತ್ತಿದೆ.
