ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲಮುಳ್ಳೂರು ಗ್ರಾಮದ ಮಾಡತ್ತಡ್ಕದಲ್ಲಿ ಮಂಗಳವಾರ (ಮಾ. 4) ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ 3-4 ಕಿ.ಮೀ. ವ್ಯಾಪ್ತಿಯ ಜನರು ಬೆಚ್ಚಿಬಿದ್ದಿದ್ದಾರೆ. ಈ ಸ್ಫೋಟದ ಪರಿಣಾಮ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಮಾಡತ್ತಡ್ಕದಲ್ಲಿರುವ ಕಲ್ಲು ಕೊರೆಗಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಪೋಟಕಗಳು ಒಮ್ಮೆಲೇ ಸ್ಫೋಟಗೊಂಡಿದ್ದರಿಂದ ಭಾರೀ ಸದ್ದು ಕೇಳಿಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿದೆ. ಸ್ಫೋಟದ ಶಬ್ದ ವಿಟ್ಲ ಪೇಟೆ, ವಿಟ್ಲಕಸಬಾ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಅನುಭವಿಸಲಾಯಿತು.
ಘಟನೆಯ ಪರಿಣಾಮ:
ಹತ್ತಿರದ ಮನೆಗಳ ಗೋಡೆಗಳಿಗೆ ಬಿರುಕು ಬಿದ್ದಿದೆ.
ಕೆಲವು ಮನೆಗಳ ಶೀಟುಗಳು ಸಂಪೂರ್ಣ ಪುಡಿಪುಡಿಯಾಗಿ ಬಿದ್ದಿವೆ.
ವಿಟ್ಲ ಪೇಟೆಯಲ್ಲಿನ ಹಲವು ಮನೆಗಳ ಗಾಜುಗಳು ಅಲುಗಾಡಿ, ಜನತೆ ಆತಂಕಗೊಂಡರು.
ಜನರಲ್ಲಿ ಭೂಕಂಪ ಸಂಭವಿಸಿದ ಭಯವೂ ಉಂಟಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಅಧ್ಯಕ್ಷರಿಗೆ ಘೆರಾವ್:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್ ಅವರಿಗೆ ಗ್ರಾಮಸ್ಥರು ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲ್ಲು ಕೊರೆ ವಿಚಾರವಾಗಿ ಬಿಜೆಪಿ ಅಧ್ಯಕ್ಷರು ಪ್ರಶ್ನೆಗಳನ್ನು ಎದುರಿಸಿದ್ದರು. ಇದೀಗ ಈ ಘಟನೆಯ ಬಳಿಕ ಸ್ಥಳೀಯರು ಇನ್ನಷ್ಟು ಆಕ್ರೋಶಿತರಾಗಿದ್ದಾರೆ.
