ದುಬೈ: ಮೊಹಮ್ಮದ್ ಶಮಿ ಮಾರಕ ದಾಳಿ, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಸಮಯೋಚಿತ ಆಟದ ಬಲದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ಸ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಫೈನಲ್ಸ್‌ಗೆ ಲಗ್ಗೆಯಿಟ್ಟಿದೆ.
ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ 264 ರನ್ ಕಲೆಹಾಕಿ, ಟೀಂ ಇಂಡಿಯಾಗೆ 265 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಭಾರತ ತಂಡ 48.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿ, 4 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತು.
ಆಸೀಸ್ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡದ ಪರವಾಗಿ ಟ್ರಾವಿಸ್ ಹೆಡ್ ಹಾಗೂ ಕೂಪರ್ ಇನ್ನಿಂಗ್ಸ್ ಪ್ರಾರಂಭಿಸಿದರು. ಕೂಪರ್ ಡಕ್‌ಔಟ್ ಹೊರನಡೆದರೇ, ಟ್ರಾವಿಸ್ ಹೆಡ್ 39 ರನ್ ಗಳಿಸಿ ಔಟಾಗುವ ಮೂಲಕ ಆಸೀಸ್‌ಗೆ ಆರಂಭಿಕ ಆಘಾತ ಎದುರಾಯಿತು.
ನಾಯಕ ಸ್ಮಿತ್ 73(96), ಅಲೆಕ್ಸ್ ಕ್ಯಾರಿ 61(57) ಗಳಿಸಿದ್ದೆ ತಂಡದ ಪರವಾಗಿ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಘಟಾನುಘಟಿ ಆಟಗಾರರ ಅನುಪಸ್ಥಿತಿಯಲ್ಲಿ ನೀರಸ ಪ್ರದರ್ಶನ ತೋರಿದ ಆಸೀಸ್‌ಗೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು.
ಉಳಿದಂತೆ ಮಾರ್ನಸ್ ಲ್ಯಾಬುಷೇನ್ 29, ಇಂಗ್ಲಿಸ್ 11, ಗ್ಲೇನ್ ಮ್ಯಾಕ್ಸ್‌ವೆಲ್ 7, ಬೆನ್ ಡ್ವಾರ್ಶುಯಿಸ್ 19, ಜಂಪಾ 7, ಎಲ್ಲಿಸ್ 10, ತನ್ವೀರ್ ಸಂಘಾ ಔಟಾಗದೇ 1 ರನ್ ಗಳಿಸಿದರು.
ಭಾರತ ತಂಡದ ಪರವಾಗಿ ಶಮಿಗೆ ಮೂರು ವಿಕೆಟ್, ರವೀಂದ್ರ ಜಡೇಜಾ ಹಾಗೂ ವರುಣ್‌ಗೆ ತಲಾ ಎರಡು ವಿಕೆಟ್, ಹಾರ್ದಿಕ್ ಮತ್ತು ಅಕ್ಷರ್ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
ಟೀಂ ಇಂಡಿಯಾ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಶುಭ್‌ಮನ್ ಗಿಲ್ 8 ರನ್ ಗಳಿಸಿ ಔಟಾದರು. ಎರಡು ಬಾರಿ ಜೀವದಾನ ಪಡೆದರು ನಾಯಕ ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಹಿಟ್‌ಮ್ಯಾನ್ 28 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಬಳಿಕ ಜೊತೆಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಿರಾಟ್ ಕೊಹ್ಲಿ 98 ಎಸೆತಗಳಲ್ಲಿ 5 ಬೌಂಡರಿ ಸಹಿತ 84 ರನ್ ಗಳಿಸಿದರೇ, ಶ್ರೇಯಸ್ 45(62) ರನ್ ಗಳಿಸಿದರು. ಅಕ್ಷರ್ ಪಟೇಲ್ 27 ರನ್ ಬಾರಿಸಿ ಉಪಯುಕ್ತ ಕಾಣಿಕೆ ನೀಡಿದರು.
ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 1 ಬೌಂಡರಿ, 3 ಭರ್ಜರಿ ಸಿಕ್ಸರ್ ಸಹಿತ 28 ರನ್ ಚಚ್ಚಿದರು. ಮತ್ತೊಂದೆಡೆ ನಾಟ್‌ಔಟ್ ಆಗಿ ಉಳಿದ ಕೆ.ಎಲ್ ರಾಹುಲ್ 34 ಎಸೆತ 2 ಬೌಂಡರಿ 2 ಸಿಕ್ಸರ್ ಸಹಿತ 42 ರನ್ ಬಾರಿಸಿ ಭರ್ಜರಿ ಸಿಕ್ಸರ್ ಮೂಲಕ ಪಂದ್ಯವನ್ನು ಗೆದ್ದುಕೊಟ್ಟರು. ಜಡೇಜಾ ಔಟಾಗದೇ 2 ರನ್ ಗಳಿಸಿದರು.
ಆಸೀಸ್ ಪರ ಆಡಂ ಜಂಪಾ ಮತ್ತು ನಥನ್ ಎಲಿಸ್ ತಲಾ ಎರಡು ವಿಕೆಟ್ ಪಡೆದರು.

