ಉಡುಪಿ : ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪುತ್ತೂರು ಉದ್ಯಮಿಯ ಬಳಿ ದರೋಡೆ ಪ್ರಕರಣ ಸಂಬಂಧ ಗರುಡ ಗ್ಯಾಂಗ್ ಕುಖ್ಯಾತ ಸದಸ್ಯ ಇಸಾಕ್ ಉಡುಪಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಮಾ.4 ರಂದು ರಾತ್ರಿ ನೆಲಮಂಗಲ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಥಾರ್ ಜೀಪ್ ನಲ್ಲಿ ತಪ್ಪಿಸಿಕೊಂಡು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನದಿಂದ ಹಾರಿ ಪರಾರಿಯಾದ ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರದಂದು ಆತನ ಗೆಳತಿ ಸುಜೈನ್ (25) ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸೋಮಶೇಖರ್ ಅವರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ 2 ನೇ ಆರೋಪಿ ಇಸಾಕ್ ಪತ್ತೆಗಾಗಿ ಮಣಿಪಾಲಕ್ಕೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ರಸ್ತೆ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿರುವ ಗೆಳತಿ ಸುಜೈನ್ ಮನೆಗೆ ಆರೋಪಿ ಬಂದಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಸೋಮಶೇಖರ್ ಮತ್ತು ನಿರೀಕ್ಷಕ ನರೇಂದ್ರ ಬಾಬು ನೇತೃತ್ವದ ತಂಡ ಸುಜೈನ್ ಮನೆಯನ್ನು ಪತ್ತೆ ಮಾಡಿ ಆರೋಪಿ ಹೊರಬರುವುದನ್ನೇ ಕಾಯುತ್ತಿದ್ದರು. ರಾತ್ರಿ ಸುಮಾರು 8 ಗಂಟೆಗೆ ಸುಜೈನ್ ಹಾಗೂ ಆಕೆಯ ತಂಗಿ ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿದ್ದರು. ಆರೋಪಿಯ ಆಗಮನ ನಕಲಿ ನೋಂದಣಿ ಸಂಖ್ಯೆಯಿದ್ದ ಕಪ್ಪು ಬಣ್ಣದ ಮಹೀಂದ್ರ ಥಾರ್ ಈ ವೇಳೆ ವಾಹನದಲ್ಲಿ ವ್ಯಕ್ತಿಯೊಬ್ಬ ಆಗಮಿಸಿದ. ಆದರೆ ಆತ ಆರೋಪಿಯೇ ಎಂಬ ಬಗ್ಗೆ ಪೊಲೀಸರಿಗೆ ಖಚಿತತೆ ಇರಲಿಲ್ಲ. ಕೂಡಲೇ ಪೊಲೀಸರು ತಾವಿದ್ದ ವಾಹನದಲ್ಲಿ ಆ ವಾಹನವನ್ನು ಹಿಂಬಾಲಿಸಿದರು. ಈ ವೇಳೆ ಆ ವಾಹನ ಸ್ವಲ್ಪ ದೂರ ಹೋಗಿ ಯೂ ಟರ್ನ್ ತೆಗೆದು ಬಂದು ಜಿಲ್ಲಾಧಿಕಾರಿ ರಸ್ತೆಯ ಅರೇಬಿಯನ್ ಹೊಟೇಲ್ ಮೊಬೈಲ್ ಅಂಗಡಿಯ ಮುಂಭಾಗ ನಿಂತಿತು. ಆಗ ಸುಜೈನ್ ವಾಹನವನ್ನು ಹತ್ತಿದ್ದು, ಅದರಲ್ಲಿ ಆರೋಪಿ ಇಸಾಕ್ ಇದ್ದದ್ದು ಪೊಲೀಸರಿಗೆ ಖಚಿತವಾಗಿ ಆತನ ಬೆನ್ನು ಬಿದ್ದರು. ಇದನ್ನರಿತ ಆರೋಪಿ, ಪೊಲೀಸ್ ಸಿಬಂದಿ ವಿಶ್ವನಾಥ ಅವರಿಗೆ ಕಾರನ್ನು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ. ಪರಿಣಾಮವಾಗಿ ಅವರು ಫುಟ್‌ಪಾತ್‌ಗೆ ಬಿದ್ದು ತೀವ್ರ ಗಾಯಗೊಂಡರು. ಈ ಸಂದರ್ಭ ನಡೆದ ಜಟಾಪಟಿಯಲ್ಲಿ ನಿರೀಕ್ಷಕ ನರೇಂದ್ರ ಬಾಬು, ಸಿಬಂದಿ ಕೇಶಾವನಂದ, ಬಾಲಾಜಿ ಸಿಂಗ್ ಮತ್ತು ರಾಯಗೊಂಡ ಅವರಿಗೂ ಗಾಯಗಳಾಗಿವೆ.
ಆರೋಪಿಯು ವಾಹನವನ್ನು ಅತಿ ವೇಗವಾಗಿ ರಿವರ್ಸ್ ನಲ್ಲಿ ಚಲಾಯಿಸಿದ್ದು, ಈ ಸಂದರ್ಭ ಕಾರು ಢಿಕ್ಕಿ ಹೊಡೆಯುವುದರಿಂದ ಸೋಮಶೇಖರ್ ಅವರು ಕೂದಲೆಳೆ ಅಂತರದಲ್ಲಿ ಪಾರಾದರು. ಬಳಿಕ ಅವರ ಕಾರಿಗೆ ಆರೋಪಿ ತನ್ನ ಕಾರನ್ನು ಢಿಕ್ಕಿ ಹೊಡೆಸಿ ಜಖಂಗೊಳಿಸಿದ. ರಿವರ್ಸ್‌ನಲ್ಲೇ ಕಾರನ್ನು ಓಡಿಸಿ ಅಲ್ಲಿದ್ದ ಎಸ್‌ಯುವಿ 700 ಕಾರಿಗೆ ಢಿಕ್ಕಿ ಹೊಡೆಸಿದ. ಪುನಃ ಕಾರನ್ನು ಅತಿವೇಗದಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಕ್ರೆಟಾ ಕಾರಿಗೆ ಢಿಕ್ಕಿ ಹೊಡೆದ.
ಸರಣಿ ಅಪಘಾತ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾದ. ಈ ವೇಳೆ ಪೊಲೀಸರು ಆತನ ವಾಹನವನ್ನು ಹಿಂಬಾಲಿಸಿದ್ದು, ಮಣ್ಣಂಪಳ್ಳ ಬಳಿ ಆರೋಪಿಯ ವಾಹನದ ಟಯರ್ ಪಂಕ್ಚರ್ ಆಯಿತು. ಕೂಡಲೇ ವಾಹನವನ್ನು ಮಾರ್ಗ ಮಧ್ಯೆ ನಿಲ್ಲಿಸಿ ಗೆಳತಿಯೊಂದಿಗೆ ಕತ್ತಲೆಯಲ್ಲಿ ತಪ್ಪಿಸಿಕೊಂಡ. ಈ ಸಂದರ್ಭ ಚೇಸಿಂಗ್ ಬಗ್ಗೆ ಪೊಲೀಸರಿಗೂ ಮತ್ತು ಸಾರ್ವಜನಿಕರಿಗೂ ವಾಗ್ವಾದ ನಡೆಯಿತು. ಇದು ಆರೋಪಿಗೆ ತಪ್ಪಿಸಿಕೊಳ್ಳಲು ಅನುಕೂಲವಾಯಿತು. ಪೊಲೀಸರು ಆ ವಾಹನವನ್ನು ವಶಕ್ಕೆ ಪಡೆದಿದ್ದು, ಅದು ಬಾಡಿಗೆಗೆ ಪಡೆದ ವಾಹನವಾಗಿದೆ.
ಮೊದಲೇ ಲೊಕೇಷನ್ ಆಧಾರದಲ್ಲಿ ಆರೋಪಿಯ ಪ್ರೇಯಸಿಯ ಬೆನ್ನು ಬಿದ್ದಿದ್ದ ಪೊಲೀಸರಿಗೆ ಆಕೆ ಇಂದ್ರಾಳಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿತು. ಅಲ್ಲಿಗೆ ತೆರಳಿದಾಗ ತನ್ನ ಅಕ್ಕನ ಮನೆಯಲ್ಲಿ ಆಕೆ ಇದ್ದದ್ದು ತಿಳಿದು, ರಾತ್ರಿ 2 ಗಂಟೆ ವೇಳೆಗೆ ಆಕೆಯನ್ನು ಬಂಧಿಸಲಾಯಿತು. ಉಡುಪಿ ಕುಂಜಿಬೆಟ್ಟು ಗ್ಯಾಂಗ್‌ವಾರ್ ಸೂತ್ರಧಾರ ಮೂಲತಃ ಬೈಂದೂರಿನವನಾದ ಆರೋಪಿ ಇಸಾಕ್ ಮಾದಕ ವಸ್ತು ಪೂರೈಕೆ, ಹಲ್ಲೆ, ದರೋಡೆ ಹಲವು ಪ್ರಕರಣಗಳು ಈತನ ಮೇಲಿವೆ. ಕಳೆದ ವರ್ಷ ಉಡುಪಿಯ ಕುಂಜಿಬೆಟ್ಟು ಬಳಿ ನಡೆದ ಗ್ಯಾಂಗ್‌ವಾರ್‌ನ ಸೂತ್ರ ಧಾರನಾಗಿದ್ದ. ವಾಹನದಲ್ಲಿ ರಾದ್ಧಾಂತ ನಡೆಸಿ, ತಲವಾರು ಝಳಪಿಸಿ ಹಲ್ಲೆ ನಡೆಸಿದ್ದ. ಉಡುಪಿ, ಮಂಗಳೂರು ಸಹಿತ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಿದ್ದು, ಪೊಲೀಸರು ಈತನ ಮೇಲೆ ನಿಗಾ ಇಟ್ಟಿದ್ದರು.
ಪ್ರೇಯಸಿ ಸುಜೈನ್ ಮೂಲತಃ ಕೇರಳದವಳಾದ ಸುಜೈನ್ ಕಾನೂನು ಪದವಿಧರೆಯಾಗಿದ್ದು, ಹಲವು ವರ್ಷಗಳಿಂದ ಉಡುಪಿ ಯಲ್ಲೇ ನೆಲೆಸಿದ್ದಳು. ಆಕೆಯ ಖರ್ಚು ವೆಚ್ಚಗಳನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ದೊಡ್ಡಣಗುಡ್ಡೆಯಲ್ಲಿ ಆಕೆಯ ತಾಯಿ ವಾಸ್ತವ್ಯವಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಈಕೆ ಡಿಸಿ ಕಚೇರಿ ರಸ್ತೆಯ ಫ್ಲ್ಯಾಟೊಂದರಲ್ಲಿ ತಾಯಿ ಹಾಗೂ ಸಹೋದರಿಯೊಂದಿಗೆ ವಾಸವಿದ್ದಳು. ಆರೋಪಿಯು ಆಗಾಗ್ಗೆ ಬಂದು ಹೋಗುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿದಿತ್ತು.
ಆರೋಪಿಯ ಕಾರಿನಲ್ಲಿದ್ದ ಕತ್ತಿ, ತಲ್ವಾರ್, ಮಾದಕ ವಸ್ತು ವಶಕ್ಕೆ: ಆರೋಪಿಯ ಕಾರಿನಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿ ತಲ್ವಾರು, ಕತ್ತಿ, ಮಾದಕ ವಸ್ತುಗಳು ಸಹಿತ ಸುಮಾರು 10ರಿಂದ 15 ನಿಷ್ಕ್ರಿಯ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಪೊಲೀಸರು ಇವೆಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.
ಏನಿದು ನೆಲಮಂಗಲ ಪ್ರಕರಣ: ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 40 ಲ.ರೂ.ದರೋಡೆ ಪ್ರಕರಣ ನಡೆದಿತ್ತು. ಇದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅದರಂತೆ ಇಬ್ಬರನ್ನು ಸುರತ್ಕಲ್‌ನಲ್ಲಿ ಬಂಧಿಸಲಾಗಿತ್ತು. ಇದೇ ರೀತಿ ಇಸಾಕ್‌ನನ್ನು ಕೂಡ ಬಂಧಿಸಬಹುದು ಎಂಬ ಲೆಕ್ಕಾಚಾರ ಬೆಂಗಳೂರು ಪೊಲೀಸರದ್ದಾಗಿತ್ತು. ಆದರೆ ಆರೋಪಿ ತಪ್ಪಿಸಿಕೊಂಡಾಗ ಸ್ಥಳೀಯ ರಸ್ತೆಗಳ ಮಾಹಿತಿ ಇಲ್ಲದೇ ಪೊಲೀಸರು ಗೊಂದಲಕ್ಕೆ ಒಳಗಾದರು. ಸ್ಥಳೀಯರಿಂದ ಮಾಹಿತಿ ಪಡೆದ ಮಣಿಪಾಲ ಪೊಲೀಸರು ಕಾರ್ಯಾಚರಣೆಗೆ ಸಹಕರಿಸಿದರು. ಮಾದಕ ವಸ್ತು ಪೂರೈಕೆ? ಆರೋಪಿಯು ಹೆಚ್ಚಾಗಿ ಬೆಂಗಳೂರಿನಲ್ಲಿದ್ದರೂ ಅವಿಭಜಿತ ದ.ಕ.ಜಿಲ್ಲೆಗೆ ಹಲವು ಬಾರಿ ಬಂದು ಹೋಗಿದ್ದ. ಗೆಳತಿಯ ಮೂಲಕ ಮಾದಕ ವಸ್ತುಗಳನ್ನು ಸ್ಥಳೀಯವಾಗಿ ಪೂರೈಸುತ್ತಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಕಂಡುಬಂದ ಕಪ್ಪು ಬಣ್ಣದ ವಾಹನ, ಹಲವು ದಿನಗಳಿಂದ ಉಡುಪಿ, ಮಣಿಪಾಲ ಭಾಗದಲ್ಲಿ ಸುತ್ತಾಡುತ್ತಿತ್ತು ಎಂದಿದ್ದಾರೆ ಜನರು.


