ನ್ಯೂಸ್ ಉಬಾರ್ :ಫೆಬ್ರವರಿ 15, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮುಂದಿನ ತಿಂಗಳಿಂದ ಸಕಾಲದಲ್ಲಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಅಪಘಾತದಿಂದಾಗಿ 13 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಸಚಿವೆ, ಬೆಳಗಾವಿಯ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರು ಇನ್ನೂ 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಆದರೆ, ಮುಂದಿನ ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ, 15 ದಿನಗಳ ಹಿಂದೆ ಇಲಾಖೆಗೆ ಹಣ ಬಂದಿದ್ದು, ಮಹಿಳೆಯರು ಚಿಂತೆ ಮಾಡಬೇಕಾಗಿಲ್ಲ ಎಂದು ಸಚಿವೆ ಹೇಳಿದರು. ಹಿಂದಿನಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಮುಂದಿನ ತಿಂಗಳು ಎಲ್ಲವೂ ಸರಿಯಾಗಲಿದೆ ಎಂದು ಅವರು ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಮಸ್ಯೆಯ ಕುರಿತು, 6 ತಿಂಗಳ ಹಿಂದೆ ಈ ಬಗ್ಗೆ ಗಮನಹರಿಸಲಾಗಿದ್ದು, ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ, ಮಹಿಳೆಯರಿಗೆ ತೊಂದರೆ ನೀಡಬಾರದು ಎಂದು ಸೂಚಿಸಲಾಗಿದೆ. ಆದರೆ, ಕೆಲವು ಹೊರಗಿನ ವ್ಯಕ್ತಿಗಳು ಫೈನಾನ್ಸ್ ಮಾಡಿಸುತ್ತಿದ್ದು, ಸುಮಾರು 20,000 ಮಹಿಳೆಯರು ಫೈನಾನ್ಸ್ ತೆಗೆದುಕೊಂಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
ಒಟ್ಟಾರೆ, ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ 16 ಮತ್ತು 17ನೇ ಕಂತುಗಳ ಪಾವತಿ ಹಂತ ಹಂತವಾಗಿ ಮಾಡಲಾಗುತ್ತಿದ್ದು, ಫೆಬ್ರವರಿ ಕೊನೆಯೊಳಗೆ ಎಲ್ಲಾ ಬಾಕಿ ಇರುವ ಕಂತುಗಳು ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
