ಬೆಳ್ತಂಗಡಿ: ನೆರಿಯ ಗ್ರಾಮದ ಅಕ್ಕೋಳೆಯಲ್ಲಿ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನ ಬಾಗಿಲು ತೆರೆದು 3.12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಫೆ. 19ರಂದು ನಡೆದಿದೆ.
ಅಕ್ಕೋಳೆ ನಿವಾಸಿ ಫಾತಿಮತ್ ರಂಝೀನ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರು ಫೆ. 19ರಂದು ಬೆಳಗ್ಗೆ ಮನೆಯ ಮುಂದಿನ ಬಾಗಿಲು ತೆರೆದಿಟ್ಟು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳಗ್ಗೆ 9.30ರ ಸುಮಾರಿಗೆ ಕೋಣೆಗೆ ಹೋದಾಗ ಕಪಾಟಿನ ಬಾಗಿಲು ತೆರೆದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತ್ತು. ಇದರಿಂದ ಸಂಶಯಗೊಂಡು ಪರಿಶೀಲಿಸಿದಾಗ ಸುಮಾರು 52 ಗ್ರಾಂ. ತೂಕದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
