ಮಂಗಳೂರು: ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಗಣತಿಯನ್ನು ನಡೆಸಲಾಗುತ್ತಿದೆ.
ಸಂಚಾರ ಗಣತಿಯನ್ನು ಫೆ. 17ರಂದು ಬೆಳಗ್ಗೆ 6ರಿಂದ ಫೆ. 24ರಂದು ಬೆಳಗ್ಗೆ 6ರ ವರೆಗೆ 7 ದಿನ ನಡೆಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ 126 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ.
ವಾಹನ ಸಂಚಾರದ ಬೆಳವಣಿಗೆ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲ್ಮೈಯನ್ನು ಅಭಿವೃದ್ಧಿಪಡಿಸುವುದು, ರಸ್ತೆಗಳನ್ನು ಅಗಲಗೊಳಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮೊದಲಾದ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಸರಕಾರ ರೂಪಿಸಲು ಮತ್ತು ಕೈಗೆತ್ತಿಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಗಣತಿ ಆಯೋಜಿಸಲಾಗಿದೆ.
