ಉಡುಪಿ‌ ಕಾಪುವಿನ ಆಯುರ್ವೇದ ತಜ್ಞೆ ಡಾ. ಇನ್ಶಾ ಹುದಾ ಅವರಿಗೆ ಯುಎಇ ‘ಗೋಲ್ಡನ್ ವೀಸಾ ಸಮ್ಮಾನ’ - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಸೆಪ್ಟೆಂಬರ್ 18, 2021

ಉಡುಪಿ‌ ಕಾಪುವಿನ ಆಯುರ್ವೇದ ತಜ್ಞೆ ಡಾ. ಇನ್ಶಾ ಹುದಾ ಅವರಿಗೆ ಯುಎಇ ‘ಗೋಲ್ಡನ್ ವೀಸಾ ಸಮ್ಮಾನ’

ನ್ಯೂಸ್ ಉಬಾರ್:
ಉಡುಪಿ ಕಾಪು ಮೂಲದ ಆಯುರ್ವೇದ ತಜ್ಞ ವೈದ್ಯೆ ಡಾ. ಇನ್ಶಾ ಹುದಾ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಸರಕಾರದಿಂದ ‘ಗೋಲ್ಡನ್ ವೀಸಾ ಸಮ್ಮಾನ್’ ಪಡೆಯುವ ಮೂಲಕ ಕರಾವಳಿ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವನ್ನು ಒದಗಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೋಲ್ಡನ್ ವೀಸಾ ಸಮ್ಮಾನ ಪಡೆದ ಮೊತ್ತಮೊದಲ ಆಯುರ್ವೇದ ವೈದ್ಯೆ ಇವರಾಗಿದ್ದಾರೆ.

ಡಾ.ಇನ್ಶಾ ಹುದಾ ಉಡುಪಿ ಜಿಲ್ಲೆಯ ಕಾಪು ಮೂಲದವರು. ಅವರ ಹೆತ್ತವರಾದ ಪೀರ್ ಮುಹಮ್ಮದ್ ಹಾಗೂ ಗುಲ್ಶನ್ ಮುಹಮ್ಮದ್ ದಂಪತಿ ಮದ್ಯಮ ವರ್ಗದ ಕುಟುಂಬದಿಂದ ಬಂದವರು. ಡಾ.ಹುದಾ ಅವರು ತನ್ನೆಲ್ಲಾ ಯಶಸ್ಸು ಹಾಗೂ ಸಾಧನೆಗೆ ಹೆತ್ತವರು ಹಾಗೂ ನಿವೃತ್ತ ಅರಣ್ಯಾಧಿಕಾರಿಯಾಗಿದ್ದ ಅಜ್ಜ ಹಾಜಿ ಅಬ್ದುಲ್ಲ ಖಾದರ್ ಅವರೇ ಕಾರಣ ಎಂದು ಹೇಳುತ್ತಾರೆ.

ನನ್ನ ಹೆತ್ತವರು ನನ್ನ ಓದಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅತ್ಯುನ್ನತ ಗುರಿಯೊಂದಿಗೆ, ಶ್ರಮವಹಿಸಿ ಓದುವಂತೆ ಅವರು ನನಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುತಿದ್ದರು. ನನ್ನ ದಿವಂಗತ ಅಜ್ಜ ನನ್ನೆಲ್ಲಾ ಭವಿಷ್ಯದ ಕನಸುಗಳಲ್ಲಿ ನಂಬಿಕೆ ಇರಿಸಿ ಪ್ರೋತ್ಸಾಹಿಸುತಿದ್ದರು. ಅದೇ ರೀತಿ ತನ್ನೆಲ್ಲಾ ಶಿಕ್ಷಕರು, ಮಾರ್ಗದರ್ಶಕರನ್ನು ವಿಶೇಷ ಕೃತಜ್ಞತೆಗಳೊಂದಿಗೆ ಸ್ಮರಿಸುತ್ತೇನೆ ಎಂದರು.

ಉಡುಪಿ ವಿದ್ಯಾನಿಕೇತನದಲ್ಲಿ ತನ್ನ ಶಾಲಾ ದಿನಗಳನ್ನು ಪೂರ್ಣಗೊಳಿಸಿದ ಅವರು ಮುಂದೆ ಕುತ್ಪಾಡಿಯ ಎಸ್‌ಡಿಎಂ ಕಾಲೇಜಿನಲ್ಲಿ ಮೆರಿಟ್ ಶೀಟ್‌ನೊಂದಿಗೆ ಆಯುರ್ವೇದ ಸೀಟನ್ನು ಪಡೆದು 2011ರಲ್ಲಿ ಬಿಎಎಂಎಸ್ ಪದವಿ ಪಡೆದರು. ಬಳಿಕ ವಿವಾಹಬಂಧನಕ್ಕೊಳಗಾಗಿ ಒಂದು ಮಗುವಿನ ತಾಯಿ ಯಾದ ಬಳಿಕವೂ ತನ್ನ ಉನ್ನತ ಶಿಕ್ಷಣವನ್ನು ಮುಂದುವರಿಸಿದ ಡಾ.ಹುದಾ, 2015ರಲ್ಲಿ ಮಣಿಪಾಲ ವಿವಿ ಮೂಲಕ ಕೆಎಂಸಿಯಲ್ಲಿ ಪಂಚಕರ್ಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

2017ರಲ್ಲಿ ಯುಎಇಯಲ್ಲಿ ಅಲ್ಲಿನ ಆರೋಗ್ಯ ಸಚಿವಾಲಯ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾ.ಹುದಾ, ಆ ದೇಶದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಪರವಾನಿಗೆಯನ್ನು ಪಡೆದು. ಆಯುರ್ವೇದ ಚಿಕಿತ್ಸಾ ಪದ್ಧತೆ ಮೂಲಕ ಅವರು ಚರ್ಮ ರೋಗ, ಬೊಜ್ಜುಗೆ ಚಿಕಿತ್ಸೆ, ಸಂಧಿವಾತ, ಸ್ವಯಂನಿರೋಧಕ ಕಾಯಿಲೆ, ಆತಂಕ, ಖಿನ್ನತೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಅಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದರು. ಅಲ್ಲದೇ ಯೋಗದ ಮೂಲಕ ಬೆನ್ನುಹುರಿ ಸಮಸ್ಯೆಗೆ ನೀಡುತಿದ್ದ ಚಿಕಿತ್ಸೆ ರೋಗಿಗಳಿಂದ ಭಾರೀ ಮೆಚ್ಚುಗೆ ಪಡೆದಿತ್ತು.

ಆಯುಷ್ ವಿಶ್ವ ಸಮ್ಮೇಳನದಲ್ಲಿ ಜೀವನಶೈಲಿ ರೋಗಗಳ ಕುರಿತಂತೆ ಡಾ. ಹುದಾ ಮಂಡಿಸಿದ ಪ್ರಬಂಧ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯಕ್ಕೆ ಡಾ. ಹುದಾ ಅವರು ಯುಎಇಯ ಎಮಿರೆಟ್ಸ್ ಆಯುರ್ವೇದಿಕ್ ಗ್ರಾಜುವೇಟ್ ಅಸೋಸಿಯೇಷನ್ (ಇಎಜಿಎ)ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿ ಸುತಿದ್ದಾರೆ.ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತಿದ್ದಾರೆ. ವಿದೇಶಗಳ ಹಲವು ಕ್ಲಿನಿಕ್‌ಗಳಿಗೆ ಡಾ.ಇನ್ಶಾ ಹುದಾ ಆನ್‌ಲೈನ್ ಸಲಹೆಗಾರರಾಗಿಯೂ ಕಾರ್ಯಾಚರಿಸುತಿದ್ದಾರೆ.

ಆಯುರ್ವೇದದಲ್ಲಿ ಇನ್ನಷ್ಟು ತಜ್ಞತೆಯನ್ನು ಪಡೆಯಲು ತಮ್ಮ ಓದನ್ನು ಮುಂದುವರಿಸಿ ವಿಜ್ಞಾನ ಕ್ಷೇತ್ರದಲ್ಲಿ ಪಿಎಚ್‌ಡಿಯನ್ನು ಪಡೆಯುವ ಗುರಿಯನ್ನೂ ಡಾ.ಹುದಾ ಹೊಂದಿದ್ದಾರೆ.

Pages