ಉಪ್ಪಿನಂಗಡಿ : ಚಿನ್ನ ಕಳವು - ಒಂದು ಅಂಗಡಿಯಲ್ಲಿ ಕಳ್ಳತನ, ಇನ್ನೊಂದರಲ್ಲಿ ಮಾರಾಟ ಯತ್ನ – ಉಪ್ಪಿನಂಗಡಿಯಲ್ಲಿ ಮಹಿಳೆ ಸಿಕ್ಕಿಬಿದ್ದು ಪೊಲೀಸರ ವಶಕ್ಕೆ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಏಪ್ರಿಲ್ 28, 2025

ಉಪ್ಪಿನಂಗಡಿ : ಚಿನ್ನ ಕಳವು - ಒಂದು ಅಂಗಡಿಯಲ್ಲಿ ಕಳ್ಳತನ, ಇನ್ನೊಂದರಲ್ಲಿ ಮಾರಾಟ ಯತ್ನ – ಉಪ್ಪಿನಂಗಡಿಯಲ್ಲಿ ಮಹಿಳೆ ಸಿಕ್ಕಿಬಿದ್ದು ಪೊಲೀಸರ ವಶಕ್ಕೆ

 


ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಗ್ರಾಹಕಿಯ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಮಹಿಳೆಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.


ಎಪ್ರಿಲ್ 17 ರಂದು ಮಧ್ಯಾಹ್ನ 2.30ರ ಸಮಯದಲ್ಲಿ, ಹಸನ್ ಟವರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಗೆ ಬಂದ ಮಹಿಳೆ, ಮದುವೆ ಕಾರ್ಯಕ್ರಮಕ್ಕೆ 30 ಗ್ರಾಂ ಚಿನ್ನಾಭರಣ ಬೇಕೆಂದು ತಿಳಿಸಿದ್ದರು. “ನನ್ನ ಮನೆಯವರು ನಾಳೆ ಬಂದು ಹಣ ಕೊಟ್ಟು ಚಿನ್ನವನ್ನು ತೆಗೆದುಕೊಂಡು ಹೋಗುತ್ತಾರೆ. ನಾನು ಈಗ ಆಯ್ಕೆಮಾಡುತ್ತೇನೆ” ಎಂಬ ಮಾತು ಹೇಳಿ, ವಿವಿಧ ಮಾದರಿಯ ಆಭರಣಗಳನ್ನು ನೋಡಿದ ಮಹಿಳೆ ಬಳಿಕ ಅಲ್ಲಿ ಇದ್ದ ಕೆಲ ಚಿನ್ನಾಭರಣಗಳನ್ನು ಎಗರಿಸಿದ್ದರು.



ಅಂದಿನ ರಾತ್ರಿ ಮಳಿಗೆಯಲ್ಲಿ ದಾಸ್ತಾನು ಪರಿಶೀಲನೆ ವೇಳೆ 72 ಗ್ರಾಂ ತೂಕದ ಚಿನ್ನಾಭರಣ ಕೊರತೆಯಾಗಿರುವುದು ಪತ್ತೆಯಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬುರ್ಖಾ ಧಾರಿಣಿಯಾಗಿ ಬಂದ ಮಹಿಳೆ 24 ಗ್ರಾಂ ತೂಕದ ಕಾಲು ಚೈನ್ 2, 8 ಗ್ರಾಂ ತೂಕದ ಬ್ರಾಸ್‌ಲೆಟ್, ಹಾಗೂ 16 ಗ್ರಾಂ ತೂಕದ ಸರ ಸೇರಿ ಒಟ್ಟು 4.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದಿಯುತ್ತಿದ್ದ ದೃಢಪಟ್ಟಿದೆ.


ಕಳವು ಮಾಡಿದ ಆಭರಣಗಳನ್ನು ಮಹಿಳೆ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲೆ ಬಳಿ ಇರುವ ಮತ್ತೊಂದು ಚಿನ್ನದ ಅಂಗಡಿಗೆ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಅಂಗಡಿ ಮಾಲಿಕನಿಗೆ ಅನುಮಾನ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರಣೆ ವೇಳೆ ಮಹಿಳೆ ಕೃತ್ಯ ಒಪ್ಪಿಕೊಂಡಿದ್ದಾಳೆ.


ಆರೋಪಿ ಮಹಿಳೆಯನ್ನು ಆಯಿಷತ್ ಶಮೀಲಾಬಿ ಎಂದು ಗುರುತಿಸಲಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.



ಹೀಗೆ ಮತ್ತಷ್ಟು ಸ್ಥಳೀಯ ಸುದ್ದಿಗಳಿಗಾಗಿ www.newsubaar.in ಗೆ ಭೇಟಿ ನೀಡಿ


Pages