ಉಡುಪಿ: ಪೊಲೀಸರ ಫೈರಿಂಗ್‌ಗೆ ಗುರಿಯಾದ ಗರುಡ ಗ್ಯಾಂಗ್ ಸದಸ್ಯ ಇಸಾಕ್
ಉಡುಪಿ, ಮಾರ್ಚ್ 12: ಕುಖ್ಯಾತ ನಟೋರಿಯಸ್ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್ ಮೇಲೆ ಮಣಿಪಾಲ ಇನ್ಸ್‌ಪೆಕ್ಟರ್ ದೇವರಾಜ್ ಮತ್ತು ಅವರ ತಂಡ ಹಿರಿಯಡ್ಕದಲ್ಲಿ ಫೈರಿಂಗ್ ನಡೆಸಿದ್ದಾರೆ. ಈ ಘಟನೆ ಮಾ.12 ರಂದು ರಾತ್ರಿ 7:30ರ ಸುಮಾರಿಗೆ ನಡೆದಿದೆ. ಗಾಯಗೊಂಡ ಇಸಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣ ಸಂಬಂಧ ಇಸಾಕ್ ಉಡುಪಿಯಲ್ಲಿ ಅಡಗಿಕೊಂಡಿದ್ದ ಎಂಬ ಮಾಹಿತಿ ಮೇರೆಗೆ ಮಣಿಪಾಲ ಮತ್ತು ನೆಲಮಂಗಲ ಪೊಲೀಸರು ಮಾ.4 ರಂದು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಸಾಕ್ ಥಾರ್ ಜೀಪಿನಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಇಸಾಕ್ ಮತ್ತು ಆತನ ಪ್ರೇಯಸಿಯ ವಿರುದ್ಧ ಕೊಲೆ ಯತ್ನ ಹಾಗೂ ಅರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಸಾಕ್ ಪ್ರೇಯಸಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇಂದು ನಡೆದ ಘಟನೆ
ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ಇಂದು ಇಸಾಕ್‌ನ ಬಂಧನಕ್ಕೆ ಮುಂದಾದಾಗ, ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ಎನ್ನಲಾಗಿದೆ. ಈ ಸಂದರ್ಭ ಜೀವ ರಕ್ಷಣೆಗಾಗಿ ಇನ್ಸ್‌ಪೆಕ್ಟರ್ ದೇವರಾಜ್ ಪಿಸ್ತೂಲ್‌ನಿಂದ ಇಸಾಕ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಇಸಾಕ್ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

