ಉಪ್ಪಿನಂಗಡಿ: ತೋಟದಲ್ಲಿ ದೋಟಿ ಬಳಸಿ ಸೀಯಾಳ ಕೀಳುತ್ತಿರುವಾಗ ಅಲ್ಯೂಮಿನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರ (29) ಮೃತಪಟ್ಟ ಘಟನೆ ಬುಧವಾರ ಬಜತ್ತೂರು ಗ್ರಾಮದ ಕುವೆಚ್ಚಾರ್ ಎಂಬಲ್ಲಿ ನಡೆದಿದೆ.
ತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೊಟ್ಟೆ ನೋವು ನಿವಾರಣೆಗೆಂದು ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ದೋಟಿ ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ದೋಟಿಗೆ ಸ್ಪರ್ಶವಾಗಿ ವಿದ್ಯುತ್ ಆಘಾತಕ್ಕೊಳಗಾದರೆನ್ನಲಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಲ್ಲಿ ಅವರು ವೃತಪಟ್ಟರೆಂದು ವೈದ್ಯರು ಘೋಷಿಸಿದರು.
ಮೃತ ವೀರಭದ್ರ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮನೆ ನಿವಾಸಿ ಗುತ್ಯಪ್ಪ ಎಂಬವರ ಮಗನಾಗಿದ್ದು, ತೋಟದ ಕಾರ್ಮಿಕನಾಗಿ ಕುವೆಚ್ಚಾರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ.
