ಮಂಗಳೂರು: ಲಕ್ಷದ್ವೀಪ ದಿಂದ ಪ್ರಯಾಣಿಕರನ್ನು ಮಂಗಳೂರಿಗೆ ತರುವ ಮತ್ತೂಂದು ಮಿನಿ ಹಡಗು “ಚೆರಿಯಪಾನಿ’ ಈ ವರ್ಷ ಮೂರನೇ ಬಾರಿಗೆ ಮಂಗಳೂರು ಹಳೆ ಬಂದರಿಗೆ ಆಗಮಿಸಿದೆ.
150ರಷ್ಟು ಪ್ರಯಾಣಿಕರು ಲಕ್ಷದ್ವೀಪ ದಿಂದ ತಮ್ಮ ಉದ್ದೇಶಗಳಿಗಾಗಿ ಮಂಗಳೂರಿಗೆ ಈ ಹಡಗಿನ ಮೂಲಕ ಆಗಮಿಸಿದರು. ಲಕ್ಷದ್ವೀಪದಿಂದ ಕಳೆದ ವರ್ಷದ ವರೆಗೆ ಪ್ರಯಾಣಿಕರು ಹಡಗಿನಲ್ಲಿ ಆಗಮಿಸುವುದು ಕಡಿಮೆಯಾಗಿತ್ತು. ಕಳೆದ ಬಾರಿಯಿಂದ ನಿರಂತರವಾಗಿ ತಿಂಗಳಿಗೊಂದರಂತೆ ಹಡಗುಗಳು ಬರುತ್ತಿವೆ.
ಸಾಮಾನ್ಯವಾಗಿ ಲಕ್ಷದ್ವೀಪ-ಕೊಚ್ಚಿ ಮಧ್ಯೆ ಹಡಗುಗಳು ಸಂಚರಿಸುತ್ತಿದ್ದು, ಮಂಗಳೂರಿಗೆ ದೂರ ಕಡಿಮೆಯಿದ್ದರೂ ಈ ಕಡೆಗೆ ಬರುವುದು ಕಡಿಮೆ. ಆದರೆ ಲಕ್ಷದ್ವೀಪದ ಜನರು ವೈದ್ಯಕೀಯ, ಶಿಕ್ಷಣ, ಉದ್ಯೋಗ ಮತ್ತಿತರ ಅಗತ್ಯಗಳಿಗೆ ಮಂಗಳೂರನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಲಕ್ಷದ್ವೀಪ ಸಂಸದ ಹಮುಲ್ಲಾ ಸಯೀದ್ ಅವರೂ ಮಂಗಳೂರಿಗೆ ಹೆಚ್ಚು ಸುವ್ಯವಸ್ಥಿತ ಸಂಪರ್ಕ ಬೆಸೆಯುವ ಯೋಜನೆ ಯಲ್ಲಿರುವುದಾಗಿ ತಿಳಿದುಬಂದಿದೆ.
ಶುಕ್ರವಾರ ಲಕ್ಷದ್ವೀಪದ ಆಂಡ್ರಾಟ್ ದ್ವೀಪದಿಂದ ಆಗಮಿಸಿದ ಚೆರಿಯ ಪಾನಿಯಲ್ಲಿ 150 ಮಂದಿ ಮಂಗಳೂರಿಗೆ ಬಂದಿಳಿದಿದ್ದು, ಫೆ.15ರಂದು 150 ಮಂದಿ ತೆರಳಲಿದ್ದಾರೆ.
