ನ್ಯೂಸ್ ಉಬಾರ್:
ಉಪ್ಪಿನಂಗಡಿ: ತರಗತಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇರ ಸಂವಹನದಿಂದ ಪರಿಣಾಮಕಾರಿಯಾದ ಕಲಿಕೆಯು ಸಾಧ್ಯ. ಈ ನಿಟ್ಟಿನಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವಲ್ಲಿ ಸಹಕರಿಸಬೇಕೆಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ ಹೇಳಿದರು.
ಅವರು ಸೆ. 17 ರಂದು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಉಮೇಶ ಶೆಣೈ ಮಾತನಾಡಿ ಶಾಲಾ ಆರಂಭಕ್ಕೆ ಸರ್ವ ಸಿದ್ಧತೆಗಳನ್ನು ಮಾಡಲಾಗಿದ್ದು ಇಲಾಖೆಯಿಂದ ನೀಡಲಾದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದ್ದು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಜಯಕುಮಾರ್ ವಿದ್ಯಾರ್ಥಿಗಳ ಮನೆಯಲ್ಲಿರುವ ೧೮ ವಷ‍್ ಮೀರಿದ ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯ ಯು. ಟಿ. ತೌಸೀಫ್, ಎಸ್.ಡಿ.ಎಂ.ಸಿ. ಸದಸ್ಯರಾದ ದುರ್ಗಾ ಮಣಿ. ಎಂ, ಚಂದ್ರಶೇಖರ್ ಮಡಿವಾಳ, ಸರೋಜಿನಿ, ಲತಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಎಲಿಜಬೆತ್ ಸ್ವಾಗತಿಸಿ, ಸಂಗೀತ ಶಿಕ್ಷಕಿ ಸುಚಿತ್ರ ಹೊಳ್ಳ, ಲಕ್ಷ್ಮೀಶ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಲಾ ಶಿಕ್ಷಕ ಸುಬ್ರಹ್ಮಣ್ಯ ಭಟ್ ವಂದಿಸಿದರು.