ಟ್ರೂ ಮೀಡಿಯಾ ಮಾ.8:
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ ದಾಖಲೆಯ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಎದುರು ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಕನಸು ನುಚ್ಚು ನೂರಾಯಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗಗಳಲ್ಲೂ ಅಕ್ಷರಶಃ ಅಧಿಕಾರಯುತ ಆಟವಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡ ಫೈನಲ್ ಪಂದ್ಯದಲ್ಲಿ 85 ರನ್‌ಗಳ ಭರ್ಜರಿ ಜಯ ದಾಖಲಿಸಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ 5ನೇ ಪ್ರಶಸ್ತಿ ಗೆದ್ದು ಬೀಗಿತು.ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 184 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ಬಳಗವನ್ನು 99 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ ತನ್ನ ಆರನೇ ಟಿ20 ವಿಶ್ವಕಪ್ ಫೈನಲ್‌ನಲ್ಲಿ 5ನೇ ಟ್ರೋಫಿ ಎತ್ತಿ ಹಿಡಿಯಿತು. ಈ ಮೂಲಕ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತನ್ನ ಆಧಿಪತ್ಯ ಮುಂದುವರಿಸಿದೆ. ಆಸ್ಟ್ರೇಲಿಯಾ ಹೊರತಾಗಿ ಇಂಗ್ಲೆಂಡ್ (2009) ಮತ್ತು ವೆಸ್ಟ್ ಇಂಡೀಸ್ (2016) ಮತ್ರವೇ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡಗಳಾಗಿವೆ.