ಟ್ರೂ ಮೀಡಿಯಾ ನ್ಯೂಸ್.ನ.2 : ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆ ಆರೋಪಿ ಭರತ್ ಕುಮ್ಡೆಲುಗೆ ಸುಮಾರು 16 ತಿಂಗಳ ಬಳಿಕ ಜಾಮೀನು ದೊರೆತಿದೆ.
ಕಳೆದ ವರ್ಷ ಜೂನ್ 21 2017 ರಂದು ಎಸ್ಡಿಪಿಐ ಪಕ್ಷದ ಸಂಸ್ಥಾಪನ ದಿನದ ಪ್ರಯುಕ್ತ ಸಮಾಜ ಸೇವೆಯಾದ ತನ್ನ ಗ್ರಾಮದಲ್ಲಿನ ರಸ್ತೆಯನ್ನು ದುರಸ್ಥಿಗೊಳಿಸಿ, ಅದೇ ಕೆಸರಾದ ಬಟ್ಟೆಯಲ್ಲಿ ತನ್ನ ಖಾಯಂ ಗಿರಾಕಿಯೋರ್ವರನ್ನು ರಿಕ್ಷಾ ಬಾಡಿಗೆಗೆ ಕರೆದುಕೊಂಡು ಹೋಗಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ದ.ಕ ಜಿಲ್ಲೆಯ ಬೆಂಜನ ಪದವು ಎಂಬಲ್ಲಿ ಹಂತಕರು ಬೀಸಿದ ತಲವಾರು ದಾಳಿಗೆ ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಬಲಿಯಾಗಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯವಾಹಿನಿಗಳು ರೌಡಿ ಶೀಟರ್ ಹತ್ಯೆ ಎಂಬ ನಿರಾಧಾರ ಸುಳ್ಳು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿ, ತನಿಖೆಯ ಹಾದಿ ತಪ್ಪಿಸಲೂ ನೋಡಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿ ಪವನ್ ಕುಮಾರ್, ಸಂತೋಷ್, ಶಿವ ಪ್ರಸಾದ್, ದಿವ್ಯರಾಜ್, ರಂಜಿತ್, ಅಭಿನ್ ರೈ, ಬಜರಂಗದಳ ಪುತ್ತೂರ್ ಸಹಸಂಚಾಲಕ ಭರತ್ ಕುಮ್ಡೆಲು ಸಹಿತ ಹಲವರನ್ನು ಬಂಧಿಸಲಾಗಿತ್ತು. ಇದೀಗ 16 ತಿಂಗಳ ಬಳಿಕ ಹೈಕೋರ್ಟ್ ಭರತ್ ಕುಮ್ಡೆಲುಗೆ ಜಾಮೀನು ನೀಡಿದೆ. ಅಭಿನ್ ರೈ, ಶಿವ ಪ್ರಸಾದ್, ದಿವ್ಯರಾಜ್ ಗೆ ಇನ್ನೂ ಜಾಮೀನು ಸಿಕ್ಕಿಲ್ಲ.