ನ್ಯೂಸ್ ಉಬಾರ್ , ಮೇ.14: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಸಂಪತ್ ಕುಮಾರ್ ಮೃತ ವ್ಯಕ್ತಿ. 2022ರಲ್ಲಿ ಸಿದ್ದರಾಮಯ್ಯ ಅವರು ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಸಂಪತ್ ಕುಮಾರ್ ಎಂಬಾತ ಮೊಟ್ತೆ ಎಸೆದಿದ್ದ ಪ್ರಕರಣ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿ ಎನ್ನಲಾದ ಸಂಪತ್ ಕುಮಾರ್ ನ ಶವ ಹಾಸನದಲ್ಲಿ ಪತ್ತೆಯಾಗಿದೆ.
ಏಪ್ರಿಲ್ 9ರಂದು ಕೊಡಗಿನ ಕುಶಾಲನಗರದಿಂದ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದ. ಏ.10ರಂದು ಸಂಪತ್ ಕುಮಾರ್ ತೆಗೆದ್ಕೊಂಡು ಹೋಗಿದ್ದ ಕಾರು ಹಾಸನ ಜಿಲ್ಲೆಯ ಸಕಲೇಶಪುರದ ಕಲ್ಲಹಳ್ಳಿಬಳಿ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆಗಳು ಇದ್ದವು. ಆದರೆ ಸಂಪತ್ ಸುಳಿವು ಇರಲಿಲ್ಲ. ಕುಶಾಲನಗರ ಠಾಣೆಯಲ್ಲಿ ಸಂಪತ್ ಕುಮಾರ್ ನಾಪತ್ತೆ ಕೇಸ್ ದಾಖಲಾಗಿತ್ತು.
ಇತ್ತ ಕಾರು ಪತ್ತೆಯಾದ ಬಗ್ಗೆ ಸ್ಥಳೀಯರು ಯಸಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಆದರೆ ಈಗ ಸಂಪತ್ ಕುಮಾರ್ ಮೃತದೇಹ ಕಲ್ಲಹಳ್ಳಿ ಬಳಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಶವವನ್ನು ಕಾರಿನಲ್ಲಿ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.



