ಕಲಬುರಗಿ : ಹಣ ನೀಡಿದರೆ ದೇಶದ ಯಾವುದೇ ವಿವಿದ ವಿವಿಗಳ ಅಂಕಪಟ್ಟಿ ನೀಡುವ ದೊಡ್ಡ ಜಾಲವನ್ನು ಕಲಬುರಗಿ ಮಹಾನಗರ ಪೊಲೀಸರು ಬಯಲಿಗೆಳೆದಿದ್ದಾರೆ. ಅಂಕಪಟ್ಟಿ ಹಗರಣದ ಕಿಂಗ್‌ಪಿನ್ ದೆಹಲಿಯ ರಾಜೀವ್‌ಸಿಂಗ್ ಅರೋರಾ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತನಿಂದ ದೇಶದ 28 ವಿವಿಧ ವಿವಿಗಳ 522 ನಕಲಿ ಅಂಕಪಟ್ಟಿಗಳು, 122 ನಕಲಿ ಸೀಲ್‌ಗಳು, 1626 ಖಾಲಿ ಅಂಕಪಟ್ಟಿಗಳು, ಪ್ರಿಂಟರ್, ಲ್ಯಾಪ್‌ಟಾಪ್, 87 ಬ್ಯಾಂಕ್ ಖಾತೆಯ ಪಾಸ್‌ಬುಕ್ ಹಾಗೂ 36 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಢಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಳೇ ಪ್ರಕರಣಕ್ಕೆ ಮರುಜೀವ: 2020ರಲ್ಲಿ ಕಲಬುರಗಿ ನಗರದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಕಲಬುರಗಿ ನಗರದ ಏಷಿಯನ್ ಮಾಲ್‌ನ ಮೊದಲ ಮಹಡಿಯಲ್ಲಿ ಐಫೋರ್‌ಯು ಗ್ಲ್ಯಾಮ್ ಚ್ವಾಯಿಸ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್ ಟೆಕ್ನಾಲಜಿ ಮತ್ತು ಪ್ಲೇಸ್‌ಮೆಂಟ್ ಬ್ಯುರೋ ಹೆಸರಿನಲ್ಲಿ ನಗರದ ತಾರಫೈಲ್ ಬಡಾವಣೆಯ ಆರೋಪಿ ಮೊಹ್ಮದ ಖಾನ್ ಯೂಸೂಫ್ ಖಾನ್ ಎಂಬಾತನು 10, 12ನೇ ತರಗತಿ ಹಾಗೂ ಐಟಿಐ, ಬಿ.ಇ ಬಿ. ಟೆಕ್ ಪದವಿಯ ನಕಲು ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಮೋಸದಿಂದ ಹಣ ಪಡೆದುಕೊಳ್ಳುತ್ತಿದ್ದಾನೆ ಎಂಬುದಾಗಿ ಪ್ರಕರಣ ದಾಖಲಾಗಿತ್ತು. ಆಗಿನ ಠಾಣಾ ಪಿಐ ಎಲ್.ಎಚ್ ಗೌಂಡಿ ಈ ಕುರಿತು ವರದಿ ನೀಡಿದ್ದರು. ಈ ಪ್ರಕರಣ ಆಧಾರದ ಮೇಲೆ ಸಿಇಎನ್ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವ್ಯಾಪಕವಾಗಿ ತಾಂತ್ರಿಕತೆಯಿಂದ ತಿಂಗಳುಗಟ್ಟಲೇ ತನಿಖೆಗೈದು ಅಂತರಾಜ್ಯ ನಕಲಿ ಅಂಕಪಟ್ಟಿ ಜಾಲ ಬಯಲಿಗೆಳೆದು ಕಿಂಗ್‌ಪಿನ್ ರಾಜೀವ್‌ಸಿಂಗ್ ಅರೋರಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಣೆ ನೀಡಿದರು.
ಯಾವ್ಯಾವ ವಿವಿಯ ನಕಲಿ ಅಂಕಪಟ್ಟಿಗಳು?: ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು ವಿವಿಯ ಹಾಗೂ ಕರ್ನಾಟಕ ಮುಕ್ತ ವಿವಿಯ ಅಂಕಪಟ್ಟಿಗಳನ್ನು ನಕಲಿಯಾಗಿ ನೀಡಿರುವುದು ಈಗ ಪತ್ತೆಯಾಗಿದೆ. ಅದೇ ತೆರನಾಗಿ ಮಹಾರಾಷ್ಟದ ಸೌಥವೆಸ್ಟ್ ವಿವಿ, ಛತ್ತಿಸ್‌ಘಡ್‌ದ ಐಎಸ್‌ಬಿಎಂ ವಿವಿ, ಸಿ.ವಿ. ರಾಮನ್ ವಿವಿ, ಮಧ್ಯಪ್ರದೇಶದ ಮಹಾರಾಜ್ ಆಗ್ರಸೇಬ್ ಹಿಮಾಲಯನ್, ರವೀಂದ್ರನಾಥ್ ಟ್ಯಾಗೋರ ವಿವಿ, ಸ್ವಾಮಿ ವಿವೇಕಾನಂದ ವಿವಿ, ಅರುಣಾಚಲಯ ಪ್ರದೇಶದ ಅರುಣೋದಯ ವಿವಿ, ಉತ್ತರಾಖಂಡದ ಹಿಮಾಲಯನ್ ಘರವಾಲ ವಿವಿ, ಬೋರ್ಡ ಆಪ್ ಸ್ಕೂಲ್ ಎಜ್ಯುಕೇಶನ್, ಗುಜರಾತ್‌ನ ಸಾಬರಮತಿ ವಿವಿ, ಹರಿಯಾಣದ ನೀಲಂ ವಿವಿ, ರಾಜಸ್ಥಾನದ ಸನ್‌ರೈಜ್ ವಿವಿ, ಮಧ್ಯಪ್ರದೇಶದ ಶ್ರೀ ಸತ್ಯಸಾಯಿ ಆಪ್ ಟೆಕ್ನಾಲಾಜಿ ಆ್ಯಂಡ್ ಮೆಡಿಕಲ್ ಸೈನ್ಸ್ ಶಿಹೋರ ಸಂಸ್ಥೆ, ಉತ್ತರ ಪ್ರದೇಶ ಫಾರ್ಮಸಿ ಕೌನ್ಸಿಲ್ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ನಕಲಿಯಾಗಿ ನೀಡುತ್ತಾ ಬರಲಾಗಿದೆ. ಅದಲ್ಲದೇ ಪಿಎಚ್‌ಡಿ ಹಾಗೂ ಡಾಕ್ಟರೇಟ್ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದರು.
ನಕಲಿ ಪ್ರಮಾಣ ಪತ್ರ ನೀಡಲು 10ರಿಂದ 50 ಸಾವಿರ ರೂ. ವರೆಗೆ ಪಡೆಯಲಾಗಿದೆ. ಅದೇ ತೇರನಾಗಿ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ಪಡೆದು ಯಾರ‍್ಯಾರು ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ ಎಂಬುದನ್ನು ಜತೆಗೆ ನಕಲಿ ಅಂಕಪಟ್ಟಿ ಪಡೆದವರ ಮಾಹಿತಿ ಪಡೆದು ಅಂತಹವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯಾವ್ಯಾವ ಕೋರ್ಸ್‌ಗಳ ಅಂಕಪಟ್ಟಿ: ಪಿಯುಸಿ, ಡಿಪ್ಲೋಮಾ ಇನ್ ಎಜುಕೇಶನ್, ಡಿಪ್ಲೋಮಾ ಆಪ್ ಮೆಡಿಕಲ್ ಲ್ಯಾಬರೋಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಫಾರ್ಮಸಿ, ಡಿಪ್ಲೋಮಾ ಆಫ್ ಇಸಿಜಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್, ಇಂಜನಿಯರಿಂಗ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜನಿಯರಿಂಗ್, ಬಿಎಡ್, ಪಿಎಚ್‌ಡಿ, ಬಿಎಎಂಎಸ್, ಬಿಕಾಂ , ಬಿಎಸ್ಸಿ, ಎಂಎಸ್ಸಿ, ಬಿಸಿಎ, ಬಿಟೆಕ್, ಎಂಎ. ಎಲ್‌ಎಲ್‌ಬಿ, ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ಸೇರಿ ವಿವಿಧ 26 ಪದವಿಗಳ ಅಂಕಪಟ್ಟಿಗಳನ್ನು ನಕಲಿಯಾಗಿ ನೀಡುತ್ತಾ ಬರಲಾಗಿದೆ.
ಮೊದಲು ಕೋಚಿಂಗ್ ಸೆಂಟರ್ ತೆರೆದು ಕೋಚಿಂಗ್ ಗೆ ಬರುವ ವಿದ್ಯಾರ್ಥಿಗಳಿಗೆ ಗಾಳ ಹಾಕಿ ನಕಲಿ ಅಂಕಪಟ್ಟಿ ನೀಡಿಕೆ ದಂಧೆ ಮೈಗೂಢಿಸಿಕೊಂಡ ದೆಹಲಿ ಮೂಲದ ಬಿಎಸ್ಸಿ ಪದವಿ ಹೊಂದಿರುವ ರಾಜೀವ್ ಸಿಂಗ್ ತದನಂತರ ವ್ಯವಸ್ಥಿತವಾಗಿ ದಂಧೆ ಶುರು ಮಾಡಿಕೊಂಡ. ಪ್ರಮುಖವಾಗಿ ನೈಸ್ ಶಿಕ್ಷಣ ಗ್ರೂಪ್ ರಚಿಸಿಕೊಂಡು ತನ್ನ ಕರಾಳ ದಂಧೆ ವಿಸ್ತರಿಸಿಕೊಂಡ. ಆದರೆ ಕಲಬುರಗಿ ಸಿಇಎನ್ ಪೊಲೀಸ್ ಠಾಣೆಯ ಎಸಿಪಿ ಮಡಿವಾಳಪ್ಪ, ಪಿಐ ಸಂಜೀವಕುಮಾರ ಕುಂಬಾರಗೆರೆ ಹಾಗೂ ಸಿಬ್ಬಂದಿಯವರು ನಿರಂತರವಾಗಿ ಬೆನ್ನಟ್ಟಿ ದೆಹಲಿ ಹಾಗೂ ಇತರೆಡೆ ತೆರಳಿ ನಕಲಿ ಅಂಕಪಟ್ಟಿ ತಯಾರಿಕಾ ಅಂತಾರಾಜ್ಯ ಜಾಲವನ್ನು ಬಯಲಿಗೆಳೆದಿದ್ದಾರೆ. ಪ್ರಕರಣ ಬಯಲಿಗೆಳೆದಿರುವುದು ಪ್ರಶಂಸನೀಯಕ್ಕೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಇದು ದೇಶದಾದ್ಯಂತ ನಕಲಿ ಅಂಕಪಟ್ಟಿಯ ಜಾಲವಾಗಿದ್ದರಿಂದ ಈ ಕುರಿತು ಯುಜಿಸಿಗೂ ಪತ್ರ ಬರೆದು ಮಾಹಿತಿ ನೀಡಲಾಗುವುದು. ಬೇರು ಸಮೇತ ಈ ಪ್ರಕರಣ ಬಯಲಿಗೆಳೆಯಲಾಗುವುದು. ಈ ದಂಧೆಯಲ್ಲಿ ಪಾಲ್ಗೊಂಡವರ ಜತೆಗೆ ನಕಲಿ ಅಂಕಪಟ್ಟಿ ಪಡೆದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಢಗೆ ಹೇಳಿದರು.

