ಹೈದರಾಬಾದ್, ಫೆ.10: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಲಡ್ಡು ತಯಾರಿಕೆಯ ಗುತ್ತಿಗೆ ಪಡೆದಿದ್ದ ಮತ್ತು ತುಪ್ಪ ಪೂರೈಕೆ ಗುತ್ತಿಗೆ ಹೊಂದಿದ್ದ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದಿಂಡಿಗಲ್) ಎಂಡಿ ರಾಜು ರಾಜಶೇಖರನ್ ಅವರನ್ನು ಲಡ್ಡು ಪ್ರಸಾದ ಕಲಬೆರಕೆ ಹಗರಣದಲ್ಲಿ ಬಂಧಿಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿ ಪಡೆಯಲಿದ್ದಾರೆ.
ತನಿಖೆಯಲ್ಲಿ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು, ಟೆಂಡರ್ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಿರುವುದು ಪತ್ತೆಯಾಗಿದೆ. ವೈಷ್ಣವಿ ಡೈರಿ ಮತ್ತು ಭೋಲೆ ಬಾಬಾ ಡೈರಿ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ದೇಶವನ್ನೇ ಬೆಚ್ಚಿಬೀಳಿಸಿತ್ತು. ಹಿಂದೂ ಧರ್ಮೀಯರ ನಂಬಿಕೆಗೆ ಅಪಮಾನ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಚಂದ್ರಬಾಬು ನಾಯ್ಡು ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
